ಗಾನ - ಅಲ್ಟೈ

ರಷ್ಯನ್ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯದ ಅಷ್ಟೈ ಕ್ರೈ ಪ್ರದೇಶದ ಆಗ್ನೇಯ ಭಾಗದಲ್ಲಿರುವ ಸ್ವಯಮಾಡಳಿತ ವಿಭಾಗ (ಆಬ್ಲಾಸ್ಟ). ಇದನ್ನು ರಚಿಸಿದ್ದು 1922ರಲ್ಲಿ. ಆಗ ಇದಕ್ಕೆ ಆಯಿರಟ್ ಸ್ವಯಮಾಡಳಿತ ವಿಭಾಗವೆಂಬ ಹೆಸರಿತ್ತು. ಇದಕ್ಕೆ ಈಗಿನ ನಾಮಕರಣವಾದ್ದು 1948 ರಲ್ಲಿ. ಇದರ ವಿಸ್ತೀರ್ಣ 35,753 ಚ.ಕಿಮೀ. ಈ ಪ್ರದೇಶದ ಬಹುಭಾಗ ಪರ್ವತಮಯ. ಪರ್ವತಶ್ರೇಣಿಗಳು ಉತ್ತರದಿಂದ ದಕ್ಷಿಣಕ್ಕೆ ಹಬ್ಬಿ ಆಲ್ಟೈ ಶ್ರೇಣಿಯನ್ನು ಸೇರಿಕೊಳ್ಳುತ್ತವೆ. ಇವುಗಳ ಕೊನೆಯಲ್ಲಿರುವ ಬ್ಯಿಲೂಕ ಶಿಖರದ ಎತ್ತರ 48,783'. ಗಾರ್ನ - ಅಲ್ಟೈ ಪ್ರದೇಶದ ಉನ್ನತ ಪರ್ವತ ಶ್ರೇಣಿಗಳಲ್ಲಿ ಮುಖ್ಯವಾದವು ಕತೂನ್ಸ್‍ಕಿ, ಉತ್ತರ ದಕ್ಷಿಣ ಚುಯಾ ಮತ್ತು ಚಿಕಾಚೇವ. ಬಿಯಾ ಚುಯಾಕತೂನ್ - ಇವು ಅಬ್ ನದಿಯ ಶಿರೋಭಾಗದ ತೊರೆಗಳು.

	ಗಾರ್ನ -ಅಲ್ಟೈ ಪ್ರದೇಶದ್ದು ಖಂಡಾಂತರ ವಾಯುಗುಣ. ಜನವರಿಯ ಸರಾಸರಿ ಉಷ್ಣತೆ - 200 ಫ್ಯಾ. ಬೇಸಗೆ ತಂಪಾಗಿರುತ್ತದೆ (580 - 600 ಫ್ಯಾ). ಮಳೆ ಪಶ್ಚಿಮದ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ 50", ಪೂರ್ವದ ಕಣಿವೆಗಳಲ್ಲೂ 12". 

	ಗಾರ್ನ - ಅಲ್ಟೈ ಜನಸಂಖ್ಯೆ 1,57,161 (1959). ಆಡಳಿತ ಕೇಂದ್ರ ಗಾರ್ನ - ಅಲ್ಟೈಕ್ಸ್ (28,000). ಈ ವಿಭಾಗದ ಜನರ ಮುಖ್ಯ ಕಸುಬು ಕೃಷಿ. ಹಾಲು ಮಾಂಸಗಳಿಗೆ ದನವನ್ನು ಹೆಚ್ಚಾಗಿ ಸಾಕುವುದೂ ಉಂಟು. ಓಟ್ಸ್, ಬಾರ್ಲಿ, ರೈ, ಗೋಧಿ, ತರಕಾರಿ, ಆಲೂಗಡ್ಡೆ ಮುಖ್ಯ ಬೆಳೆಗಳು. ಜೇನು ಸಾಕುವುದು, ಚೌಬೀನೆ ಇನ್ನೆರಡು ಮುಖ್ಯ ಕಸುಬುಗಳು. ಗಾರ್ನ - ಅಲ್ಟೈಕ್ಸ್‍ನಲ್ಲಿ ಕೈಗಾರಿಕೆಗಳು ಕೇಂದ್ರೀಕೃತವಾಗಿವೆ. ಜವಳಿ, ಅಣೆಕಟ್ಟು, ಮಾಂಸವೇಷ್ಟನ-ಇವು ಮುಖ್ಯ ಕೈಗಾರಿಕೆಗಳು. ಅಲ್ಟೈ ಭಾಷೆಯ ವೈಜ್ಞಾನಿಕ ಸಂಶೋಧನ ಸಂಸ್ಥೆಯೊಂದು ಇಲ್ಲಿದೆ. ಚೆಮಾಲ್ ಆರೋಗ್ಯದಾಣ. ಕಬ್ಬಿಣ ಅದುರು, ಕಲ್ಲಿದ್ದಲು, ಅಮೃತಶಿಲೆ, ಆಸ್ಬೆಸ್ಟಸ್, ಗ್ರಾಫೈಟ್, ಸಿನ್ನಾಬಾರ್, ಚಿನ್ನ, ಪಾದರಸ-ಇವು ಈ ಪ್ರದೇಶದಲ್ಲಿ ದೊರಕುವ ಮುಖ್ಯ ಖನಿಜಗಳು. ಕೊನೆಯ ಎರಡರ ಗಣಿಗಾರಿಕೆ ಬೆಳೆದಿದೆ.												 (ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ